• A
  • A
  • A
1 ಲಕ್ಷವರೆಗಿನ ಚಾಲ್ತಿ ಸಾಲವೂ ಮನ್ನಾ, ಮತ್ತೆ 7 ಕೆಜಿ ಅನ್ನಭಾಗ್ಯದ ಅಕ್ಕಿ: ಸಿಎಂ ಘೋಷಣೆ

ಬೆಂಗಳೂರು: ನಮ್ಮ ಜೀವ ಕೊಟ್ಟಾದರೂ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಸಿಎಂ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಬಜೆಟ್ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ನಾಡಿನ ರೈತರ ಸಾಲ ಮನ್ನಾ ವಿಚಾರವಾಗಿ ನಮ್ಮ ಬದ್ಧತೆ ಇದ್ದು, ಅವರನ್ನು ಉಳಿಸುವುದು ಸಮ್ಮಿಶ್ರ ಸರ್ಕಾರದ ಕರ್ತವ್ಯ ಎಂದರು.


ಒಂದು ಲಕ್ಷ ಚಾಲ್ತಿ ಸಾಲ ಮನ್ನಾ:
ರೈತರ ಸುಸ್ತಿ ಸಾಲವನ್ನು ಮನ್ನಾ ಮಾಡಿದ್ದ ಸಿಎಂ ಕುಮಾರಸ್ವಾಮಿ, ಪ್ರತಿಪಕ್ಷಗಳ ತೀವ್ರ ಟೀಕೆಗೆ ಗುರಿಯಾಗಿದ್ದರು. ಈ ನಿಟ್ಟಿಲಿನಲ್ಲಿ ಕುಮಾರಸ್ವಾಮಿ ಒಂದು ಲಕ್ಷ ರೂ.ವರೆಗೆ ಸಹಕಾರಿ ಬ್ಯಾಂಕ್​ಗಳಲ್ಲಿರುವ ರೈತರ ಚಾಲ್ತಿ ಸಾಲವನ್ನು ಮನ್ನಾ ಮಾಡುವುದಾಗಿ ಸದನದಲ್ಲಿ ಘೋಷಣೆ ಮಾಡಿದರು. ಆ‌ ಮೂಲಕ ಸುಮಾರು 10.700 ಕೋಟಿ ರೂಪಾಯಿ ಹೊರೆ ಬೀಳಲಿದೆ ಎಂದು ಇದೇ ವೇಳೆ ತಿಳಿಸಿದರು.
ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ಸುಮಾರು 10,228 ಕೋಟಿ ರೂ. ರೈತರ ಸಾಲ ಇದ್ದರೆ, ಸಹಕಾರ ಬ್ಯಾಂಕ್​ಗಳಲ್ಲಿ 10,753 ಕೋಟಿ ಸಾಲ ಬಾಕಿ ಇದೆ. ಈಗ 22 ಲಕ್ಷ ಜನರ 25,000 ರೂ.ವರೆಗಿನ ಸಾಲ ಮನ್ನಾ ಮಾಡಲು ಮುಂದಾದ್ರೂ ಸರ್ಕಾರಕ್ಕೆ 5000 ಕೋಟಿ ರೂ. ಹೆಚ್ಚಿನ ಹೊರೆಯಾಗುತ್ತದೆ ಎಂದು ವಿವರಿಸಿದರು.
6,500ಕೋಟಿ ಸಾಲ ಮನ್ನಾ ಮೊತ್ತವನ್ನು ನಾಲ್ಕು ಕಂತಿನಲ್ಲಿ ನಾಲ್ಕು ವರ್ಷಗಳ‌ಲ್ಲಿ ಪಾವತಿಸಲು ರಾಷ್ಟ್ರೀಯ ಬ್ಯಾಂಕ್​ಗಳು ಒಪ್ಪಿಕೊಂಡಿವೆ. ಈ ಎಲ್ಲಾ‌ ಪ್ರಕ್ರಿಯೆ ಮುಗಿದ ಬಳಿಕ ಋಣಮುಕ್ತ ಪತ್ರವನ್ನು ನೀಡಲಾಗುತ್ತದೆ. ನಂತರ ಹೊಸ ಸಾಲ ಕೊಡಲು ಬ್ಯಾಂಕ್​ಗಳು ಒಪ್ಪಿಕೊಂಡಿವೆ. ಇಲ್ಲಿ ನಾನು ಯಾವ ಮೋಸವನ್ನೂ ಮಾಡಿಲ್ಲ, ದೋಖಾವನ್ನೂ ಮಾಡಿಲ್ಲ. ಜನರಿಗೆ ಟೋಪಿ ಹಾಕಿ ನನಗೆ ಓಡಾಡಲು ಸಾಧ್ಯವಿದೆಯಾ ಎಂದು ಪ್ರತಿಪಕ್ಷಕ್ಕೆ ಟಾಂಗ್ ನೀಡಿದರು.
ಉತ್ತರ ಕರ್ನಾಟಕಕ್ಕೆ ತಾರತಮ್ಯವಿಲ್ಲ:
ಉತ್ತರ ಕರ್ನಾಟಕದ ಕಡೆಗಣನೆಯ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ ಸಿಎಂ, ನಾನು ದೂರ ದೃಷ್ಟಿಯಿಂದ ನಾನಾ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು, ನನಗೆ ಅವಕಾಶ‌ಕೊಡಿ ಸಮಗ್ರ ಕರ್ನಾಟಕದ ಅಭಿವೃದ್ಧಿಯೇ ನಮ್ಮ ಗುರಿ ಎಂದು ತಿಳಿಸಿದರು.
ನಾಲ್ಕು ಜಿಲ್ಲೆಗಳಿಗೆ ಸೀಮಿತವಾದ ಬಜೆಟ್ ಎಂದು ಆರೋಪಿಸಲಾಗುತ್ತಿದೆ. ಕಾಂಗ್ರೆಸ್ ಹಿರಿಯ ನಾಯಕ ಹೆಚ್.ಕೆ.ಪಾಟೀಲ್ ಬೆಂಗಳೂರು ವಿಭಾಗಕ್ಕೆ ಶೇ. 82ರಷ್ಟು ಅನುದಾನ ನೀಡಿರುವುದಾಗಿ ಹೇಳಿದ್ದಾರೆ. ಆ ಥರ ಆಗಿಲ್ಲ. ಹೈ-ಕ ಅಭಿವೃದ್ಧಿ ಪ್ರಾಧಿಕಾರಕ್ಕೆ ಸುಮಾರು 1 ಸಾವಿರ ಕೋಟಿ ಇಟ್ಟಿದ್ದೇವೆ. ಯಾವುದೇ ತಾರತಮ್ಯ ಮಾಡಿಲ್ಲ. ಕಳೆದ 25-30 ವರ್ಷಗಳಿಂದ ಮಂಡ್ಯ ನಗರ ಹೇಗಿತ್ತೋ ಹಾಗೇ ಇದೆ. ಆ ಜಿಲ್ಲೆ ಅಭಿವೃದ್ಧಿಗೆ 50 ಕೋಟಿ ಕೊಟ್ಟಿದ್ದು ತಪ್ಪೇ ಎಂದು ಪ್ರಶ್ನಿಸಿದರು.
ಹಾಸನ ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ 150 ಕೋಟಿ ರೂ. ಮಂಜೂರು ಮಾಡಿದ್ದು ಯಡಿಯೂರಪ್ಪ ಸರ್ಕಾರ. ನಂತರ ಅದು ರದ್ದಾಗಿತ್ತು. ಈಗ ಹಾಸನದಲ್ಲಿ ಬಿಜೆಪಿ ಶಾಸಕರೇ ಇದ್ದಾರೆ . ಹೊರ ವರ್ತುಲ ರಸ್ತೆಗೆ 30 ಕೋಟಿ ರೂ. ಕೊಟ್ಟರೆ ಆಕ್ಷೇಪವೇಕೆ ಎಂದು ಪ್ರಶ್ನಿಸಿದರು.
ಹಾಸನದಲ್ಲಿ ಮೆಗಾ ಡೈರಿ ನಿರ್ಮಾಣಕ್ಕೆ ಹೆಚ್.ಡಿ.ರೇವಣ್ಣ ಹಣ ಕೇಳಿದ್ದರು. ಈ ಮೆಗಾ ಡೈರಿಯ ಪ್ರಯೋಜನ ಚಿಕ್ಕಮಗಳೂರಿಗೂ ಸಿಗಲಿದೆ. ಕೋಲಾರದಲ್ಲೂ ಮೆಗಾ ಡೈರಿ ಸ್ಥಾಪನೆಗೆ ತಕ್ಷಣ ಕ್ರಮ ಕೈಗೊಳ್ತೇವೆ. ಕೋಲಾರದ ಹಾಲು ಉತ್ಪಾದಕ ಸಂಘಗಳ ಕಷ್ಟ ನನಗೆ ಗೊತ್ತಿದೆ. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಗೆ 500ಕೋಟಿ ರೂ. ನಿಗದಿ ಮಾಡಿದ್ದೇವೆ. ಉತ್ತರ ಕರ್ನಾಟಕ ಭಾಗದ ಜನರ ಕಷ್ಟ ನಮಗೆ ಗೊತ್ತಿದೆ. ಆ ಭಾಗದಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆಗೆ ಪ್ರಸ್ತಾಪಗಳು ಬಂದಿವೆ ಎಂದು ವಿವರಿಸಿದರು.
ರೈತ ಸಾಲ ಮನ್ನಾದ ಹೆಚ್ಚಿನ ಲಾಭ ಉ.ಕರ್ನಾಟಕಕ್ಕೆ:
ರೈತ ಸಾಲ ಮನ್ನಾದ ಲಾಭ ಉತ್ತರ ಕರ್ನಾಟಕಕ್ಕೆ ಆಗಲಿದೆ. ಆದರೆ ಈ ಸಾಲ ಮನ್ನಾದ ಲಾಭ‌ ಒಕ್ಕಲಿಗ ಸಮುದಾಯಕ್ಕೆ ಹೆಚ್ಚಿದೆ ಎಂಬ ಮಾಧ್ಯಮ ವರದಿ ಅದು ಎಲ್ಲಿಂದ ಹುಟ್ಟಿಕೊಂಡಿತೋ ಗೊತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸಾಲ ಮನ್ನಾದ ಲಾಭ ಬೆಳಗಾವಿ ಜಿಲ್ಲೆಗೆ 2, 670 ಕೋಟಿ ರೂ., ಬಾಗಲಕೋಟೆಗೆ 1,828 ಕೋಟಿ ರೂ., ವಿಜಯಪುರಕ್ಕೆ 1,510 ಕೋಟಿ ರೂ., ಧಾರವಾಡಕ್ಕೆ 1315 ಕೋಟಿ ರೂ., ಹಾವೇರಿ 1037 ಕೋಟಿ ರೂ., ಗದಗ 772 ಕೋಟಿ ರೂ., ಉತ್ತರ ಕನ್ನಡ 462 ಕೋಟಿ ರೂ., ದಾವಣಗೆರೆ 1212 ಕೋಟಿ ರೂ., ಹಾಸನ 1456 ಕೋಟಿ ರೂ., ಮಂಡ್ಯಗೆ 1018 ಕೋಟಿ ರೂ., ರಾಮನಗರಕ್ಕೆ 630 ಕೋಟಿ ರೂ., ಚಿತ್ರದುರ್ಗಕ್ಕೆ 918 ಕೋಟಿ ರೂ., ಮೈಸೂರಿಗೆ 947 ಕೋಟಿ ರೂ., ದ.ಕನ್ನಡಕ್ಕೆ 867 ಕೋಟಿ ರೂ‌. ಬೆಂಗಳೂರಿಗೆ 731 ಕೋಟಿ ರೂಪಾಯಿ ಲಾಭ ಆಗಲಿದೆ ಎಂದು ಅಂಕಿ-ಅಂಶಗಳೊಂದಿಗೆ ಉತ್ತರಿಸಿದರು.
ಅನ್ನಭಾಗ್ಯದ ಅಕ್ಕಿ ಪ್ರಮಾಣ ಮುಂದುವರಿಸುತ್ತೇನೆ:
ಅನ್ನಭಾಗ್ಯದ ಅಕ್ಕಿ ಪ್ರಮಾಣವನ್ನು ಐದು ಕೆಜಿಗೆ ಇಳಿಸುದ್ದರಿಂದ ನಾನು ಸಾಕಷ್ಟು ಟೀಕೆಗೆ ಒಳಗಾದೆ. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ನನ್ನ ಜೊತೆ ಮಾತನಾಡಿದ್ದಾರೆ. ಹೀಗಾಗಿ ಐದು ಕೆಜಿಯಿಂದ ಈ ಹಿಂದಿನಂತೆ ಏಳು ಕೆಜಿ ಮುಂದುವರಿಸುವುದಾಗಿ ಭರವಸೆ ನೀಡಿದರು. ಜತೆಗೆ ಬಸ್ ಪಾಸ್ ಬಗ್ಗೆನೂ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಅಲ್ಪಸಂಖ್ಯಾತರ ನಿಗಮಕ್ಕೆ 2,500 ಕೋಟಿ ರೂ. ನೀಡುವುದಾಗಿ ಘೋಷಿಸಿದ ಸಿಎಂ, ಕಳಸಾ ಬಂಡೂರಿ ಕಾಮಗಾರಿಗೂ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಬಿಜೆಪಿ ಸಭಾತ್ಯಾಗ:
ಇತ್ತ ಸಿಎಂ ಕುಮಾರಸ್ವಾಮಿ ಉತ್ತರದಿಂದ ಬಿಜೆಪಿ ತೃಪ್ತರಾಗದೆ ಸಭಾತ್ಯಾಗ ಮಾಡಿದರು. ಪೂರ್ಣ ಸಾಲ ಮನ್ನಾ ಮಾಡದೆ ಬ್ಯಾಂಕ್​ನವರು ಋಣಮುಕ್ತ ಪತ್ರ ಹೇಗೆ ಕೊಡುತ್ತಾರೆ ಎಂದು ಪ್ರತಿಪಕ್ಷ ನಾಯಕ ಯಡಿಯೂರಪ್ಪ ಪ್ರಶ್ನಿಸಿದರು. ಸಿಎಂ ಹೇಳಿಕೆ ಅತ್ಯಂತ ಅಚ್ಚರಿದಾಯಕವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸಿಎಂ ಉತ್ತರದಲ್ಲಿ ನಮ್ಮ ಅನುಮಾನ, ಆತಂಕಗಳಿಗೆ ಸ್ಪಷ್ಟೀಕರಣ ನೀಡಿಲ್ಲ. ರೈತರ ಸಾಲ ಮನ್ನಾ ವಿಚಾರವಾಗಿ ಸರ್ಕಾರಕ್ಕೆ ಬದ್ಧತೆ ಇಲ್ಲ. ಸುಳ್ಳು ಭರವಸೆ ನೀಡಿ ರೈತರಿಗೆ ದ್ರೋಹ ಮಾಡುವ ಕೆಲಸ ಮಾಡಿದೆ. ರೈತರು, ನೇಕಾರರ ಪರ ಸರ್ಕಾರಕ್ಕೆ ಕಾಳಜಿ ಇಲ್ಲದಾಗಿದ್ದು, ಇದನ್ನು ಖಂಡಿಸಿ ಸಭಾತ್ಯಾಗ ಮಾಡುತ್ತೇವೆ ಎಂದು ಹೇಳಿ ಬಿ.ಎಸ್.ಯಡಿಯೂರಪ್ಪ ತಮ್ಮ ಶಾಸಕರ ಜತೆ ಗೂಡಿ ಕಲಾಪದಿಂದ ಹೊರನಡೆದರು.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು