• A
  • A
  • A
ರಾಜ್ಯ ಬಜೆಟ್ ಎಕ್ಸ್‌ಪೆಂಡೀಚರ್ ಆಗದೇ ಇನ್‌ವೆಸ್ಟ್‌‌ಮೆಂಟ್ ಆಗಬೇಕು: ಉಪೇಂದ್ರ

ಬೆಂಗಳೂರು: ನಮ್ಮಲ್ಲಿ ಹಣಕ್ಕೆ ಕೊರತೆ ಇಲ್ಲ. ಪ್ರತಿ ವರ್ಷವೂ ಲಕ್ಷ ಕೋಟಿ ರೂ.ಗಳ ಬಜೆಟ್ ಮಂಡಿಸುತ್ತೇವೆ. ಆದರೆ ಆ ಹಣ ಖರ್ಚಾಗುತ್ತಿದೆಯೇ ಹೊರತು ಹೂಡಿಕೆಯಾಗುತ್ತಿಲ್ಲ. ಬಜೆಟ್‌ಅನ್ನು ಹೂಡಿಕೆ ರೀತಿ ಮಾಡಬೇಕು ಎನ್ನುವುದು ಕೆಪಿಜೆಪಿ ಅಧ್ಯಕ್ಷ ನಟ ಉಪೇಂದ್ರ ಅವರ ಹೊಸ ಪರಿಕಲ್ಪನೆಯಾಗಿದೆ.

ಸಂಗ್ರಹ ಚಿತ್ರ


ಎ ಫಾರ್ ಆ್ಯಪಲ್ ಆಗಬೇಕಿಲ್ಲ. ಅಮೆರಿಕ, ಆಸ್ಟ್ರೇಲಿಯಾವೂ ಆಗಬಹುದಲ್ಲಾ ಎಂದು ರಾಜಕೀಯಕ್ಕೆ ಪ್ರತಿಯಾಗಿ ತರುತ್ತಿರುವ ಪ್ರಜಾಕೀಯವನ್ನ ಸಮರ್ಥಿಸಿಕೊಂಡಿದ್ದಾರೆ.


ಹೌದು, ಇತರೆ ರಾಜಕೀಯ ಪಕ್ಷಗಳ ರೀತಿ ಪ್ರಜಾಕೀಯ ಪರಿಚಯಿಸಿರುವ ನಟ ಉಪೇಂದ್ರ ಬೇರೆ ಪಕ್ಷಗಳಿಗೂ ಮುನ್ನವೇ ಕೆಪಿಜೆಪಿ ಪಕ್ಷದ ಸಂಭಾವ್ಯ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ. ಮೊದಲ ಪ್ರಣಾಳಿಕೆ ಬಿಡುಗಡೆಗೊಳಿಸಿ ತಿಂಗಳ ಬಳಿಕ ಎರಡನೇ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಜನರನ್ನು ತಲುಪುವ ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಅದೂ ಕೂಡ ರೈತರ ಸಹಕಾರಿ ಸಂಘ ಸ್ಥಾಪನೆಯ ಹೊಸ ಕಲ್ಪನೆಯನ್ನು ದೇಶದ ಬೆನ್ನೆಲುಬಾಗಿರುವ ರೈತ ಸಮುದಾಯಕ್ಕೆ ತಲುಪಿಸಲು ಮುಂದಾಗಿದ್ದಾರೆ.

ಚುನಾವಣೆಗೆ ರಾಜಕೀಯ ಪಕ್ಷಗಳ ರೀತಿ ನಾನೂ ಕೂಡ ಸಿದ್ಧತೆ ನಡೆಸುತ್ತಿದ್ದೇನೆ. ನನ್ನ ಪ್ರಣಾಳಿಕೆಯೇ ನನ್ನ ಸಿದ್ಧತೆ, ನನ್ನ ಯೋಜನೆಗಳೇ ನಮ್ಮ ಪಕ್ಷದ ತಂತ್ರಗಾರಿಕೆ ಎಂದು ಸ್ವತಃ ಉಪೇಂದ್ರ ಸ್ಪಷ್ಟಪಡಿಸಿದ್ದಾರೆ. ಪಕ್ಷ , ವ್ಯಕ್ತಿಗಳಿಗಿಂತ ವಿಚಾರಗಳ ಮೇಲೆ ಚುನಾವಣೆ ಆಗಬೇಕು. ವಿಚಾರಗಳ ಬಗ್ಗೆ ಘರ್ಷಣೆಗಳಾಗಬೇಕು, ವಿಚಾರಗಳನ್ನು ನೋಡಿ ಜನರು ಮತ ಹಾಕಬೇಕು, ಇದುವರೆಗೆ ಆಗಿದ್ದು ಆಗಿದೆ. ಈಗಲಾದರೂ ಬದಲಾಗಬೇಕು. ನಮ್ಮ ಜನಕ್ಕೆ ಏನು ಬೇಕೋ ಅದನ್ನು ಕೊಡುವವರ ಅಗತ್ಯವಿದೆ. ಶಿಕ್ಷಣ, ಆರೋಗ್ಯ ಬಹಳ ಮುಖ್ಯ. ಇದನ್ನು ಗಮನದಲ್ಲಿಟ್ಟುಕೊಂಡೇ ನಾವು ಚುನಾವಣಾ ಅಖಾಡಕ್ಕಿಳಿಯುತ್ತಿದ್ದೇವೆ ಎಂದು ತಮ್ಮ ತಂತ್ರಗಾರಿಕೆಯ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ.

ನಮ್ಮ ಬಳಿ ಬೇಕಾದಷ್ಟು ಫಂಡ್ ಇದೆ, ಪ್ರತಿ ವರ್ಷವೂ ಬಜೆಟ್ ಏರುತ್ತಲೇ ಇದೆ. ಇಪ್ಪತ್ತು, ಮೂವತ್ತು ಸಾವಿರ ಕೋಟಿಯ ಬಜೆಟ್ ಇಂದು ಒಂದೂವರೆ, ಎರಡು ಲಕ್ಷ ಕೋಟಿ ತಲುಪುತ್ತಿದೆ. ಆದರೆ ಇಷ್ಟೊಂದು ದೊಡ್ಡ ಮೊತ್ತದಲ್ಲಿ ಮಂಡನೆಯಾಗುವ ಬಜೆಟ್ ಎಲ್ಲವೂ ಎಕ್ಸ್‌ಪೆಂಡಿಚರ್ ಆಗುತ್ತಿದೆಯೇ ಹೊರತು ಇನ್ವೆಸ್ಟ್‌ಮೆಂಟ್ ಆಗುತ್ತಿಲ್ಲ. ಒಂದು ಮಾದರಿ ಶಾಲೆಯನ್ನು ವ್ಯವಸ್ಥಿತವಾಗಿ ಕಟ್ಟಿದರೆ ಮತ್ತೆ ಅಲ್ಲಿಗೆ ಮುಂದಿನ ವರ್ಷ ಹಣ ಹಾಕುವ ಅಗತ್ಯವಿರುವುದಿಲ್ಲ. ಈ ರೀತಿ ಯೋಜನೆ ಮಾಡಬೇಕು, ಅಂತಹ ಬಜೆಟ್ ಮಂಡನೆಯಾಬೇಕು. ಹಾಗಾದಲ್ಲಿ ವರ್ಷದಿಂದ ವರ್ಷಕ್ಕೆ ಹಣ ಉಳಿದುಕೊಳ್ಳಲು ಶುರುವಾಗಲಿದೆ. ಮತ್ತು ಉಳಿತಾಯದ ಬಜೆಟ್ ಮಂಡಿಸಬಹುದು ಎಂದು ಅಭಿಪ್ರಾಯಪಟ್ಟರು.

ರೈತರಿಗಾಗಿ ಸಹಕಾರಿ ಸಂಘ ಮಾಡಿ ಅದರ ಮೂಲಕ ಹಣ ಬಿಡುಗಡೆ ಮಾಡಬೇಕು. ಆ ಹಣ ನೇರವಾಗಿ ರೈತರಿಗೆ ತಲುಪಬೇಕು. ಎಲ್ಲವೂ ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ರೈತರೇ ಸೇರಿಕೊಂಡು ಅವರಿಗೆ ಏನು ಬೇಕು ಎಂದು ಅವರವರೇ ಮಾಡಿಕೊಳ್ಳಬೇಕು. ಹಾಗಾದಲ್ಲಿ ರೈತರು ಮಾರುಕಟ್ಟೆ ನಿಯಂತ್ರಿಸುವ ಶಕ್ತಿ ಪಡೆಯಲಿದ್ದಾರೆ. ಅವರ ಬೆಳೆಗಳಿಗೂ ಉತ್ತಮ ಬೆಲೆ ಸಿಗಲಿದೆ ಎಂದು ತಮ್ಮ ಹೊಸ ಕಲ್ಪನೆಯನ್ನು ವಿವರಿಸಿದರು.

ನಮ್ಮ ಗ್ರಾಮವನ್ನು ನಾವೇ ಅಭಿವೃದ್ಧಿಪಡಿಸಬೇಕು:

ಉಪೇಂದ್ರ ವಿಚಾರಗಳು ಚನ್ನಾಗಿವೆ, ಆದರೆ ಅವರು ಗೆಲ್ತಾರಾ ಎನ್ನುವ ಪ್ರಶ್ನೆ ಈಗ ಸಾಮಾಜಿಕ ಜಾಲತಾಣದ ಪ್ರಮುಖ ವಿಷಯ ಹಾಗೂ ಜನರ ಮಾತುಗಳಾಗಿವೆ. ಆದರೆ ಗೆಲ್ತಾರಾ ಎನ್ನುವ ಪದದಲ್ಲಿನ ಪ್ರಶ್ನಾರ್ಥಕ ಚಿಹ್ನೆ ತೆಗೆದು ಗೆಲ್ತಾರೆ ಎಂದು ಮಾಡಿದರೆ ಆಯಿತು. ಎಲ್ಲವೂ ಜನರ ಕೈಯಲ್ಲಿದೆ. ವಿಚಾರ ಚೆನ್ನಾಗಿದ್ದರೆ ನಮ್ಮನ್ನು ಗೆಲ್ಲಿಸಿ, ಅನುಮಾನ ಯಾಕೆ? ನನ್ನನ್ನು ನಂಬಬೇಡಿ ನಾನು ಹೇಳುತ್ತಿರುವ ಸತ್ಯವನ್ನು ನೋಡಿ. ನಮಗೆ ಅಧಿಕಾರ ಬಂದರೆ ಸರ್ಕಾರದ ಹಣ ನನ್ನ ಬಳಿ ಹಣ ಇರಲ್ಲ. ಅದು ನಿಮ್ಮ ಬಳಿ ಹಣ ಬರಲಿದೆ, ನೀವೇ ಖರ್ಚು ಮಾಡಿ, ಎಲ್ಲವೂ ಪಾರದರ್ಶಕವಾಗಿರಲಿದೆ ಎಂದರು. ಸಣ್ಣ ಸಣ್ಣ ಪಾಕೆಟ್ ರೀತಿ ಹಣ ಹಂಚಿಕೆ ಮಾಡಿ, ಪ್ರತಿಯೊಂದು ಗ್ರಾಮ, ಪಟ್ಟಣ, ನಗರ ಯಾವ ರೀತಿ ಅಭಿವೃದ್ಧಿ ಆಗಬೇಕು ಎಂದು ತಜ್ಞರ ಸಹಾಯದಿಂದ ಬ್ಲೂ ಪ್ರಿಂಟ್ ಸಿದ್ಧಪಡಿಸಿಕೊಂಡು ಅದರ ಪ್ರಕಾರ ಹಣ ವಿನಿಯೋಗಿಸಿ ಮಾದರಿಯಾಗಿ ಅಭಿವೃದ್ಧಿಪಡಿಸಬೇಕು. ಹಂತ ಹಂತವಾಗಿ ಇದನ್ನು ಮಾಡಿಕೊಂಡು ಹೋದರೂ ಸಾಕು ರಾಜ್ಯ ಸಹಜವಾಗಿಯೇ ಅಭಿವೃದ್ಧಿಯಾಗಲಿದೆ ಎಂದರು.

ಎ ಫಾರ್ ಆ್ಯಪಲ್ ಏಕೆ, ಅಮೆರಿಕ, ಆಸ್ಟ್ರೇಲಿಯಾ ಯಾಕಾಗಬಾರದು?

ಎ ಫಾರ್ ಆ್ಯಪಲ್ ಅಂತಲೇ ಯಾಕೆ ಅನ್ನಬೇಕು, ಅಮೆರಿಕ, ಆಸ್ಟ್ರೇಲಿಯಾವೂ ಯಾಕಾಗಬಾರದು, ನಾವೆಲ್ಲ ಉದಾಹರಣೆಗಳ ಮೂಲಕವೇ ಹೇಳುತ್ತೇವೆ. ಎಲ್ಲವನ್ನೂ ಬಾಯಿಪಾಠ ಮಾಡಿರುತ್ತೇವೆ. ಎ ಫಾರ್ ಅಂದರೆ ಸಾಕು ಆ್ಯಪಲ್ ಅಂದು ಬಿಡುತ್ತೇವೆ. ಅದನ್ನು ಬಿಟ್ಟು ಬೇರೆ ಹೇಳಿ ಅಂದರೆ ಆಗ ಮಾತ್ರ ಒಬ್ಬೊಬ್ಬರು ಒಂದೊಂದು ರೀತಿಯ ಹೆಸರನ್ನು ಹೇಳುತ್ತಾರೆ. ಚುನಾವಣಾ ಆಯೋಗ ಅಭ್ಯರ್ಥಿಗಳ ಚುನಾವಣಾ ವೆಚ್ಚ ಇಷ್ಟು ಎಂದು ನಿಗದಿಪಡಿಸಿದ ಮಾತ್ರಕ್ಕೆ ನಾವು ಅಷ್ಟನ್ನು ಖರ್ಚು ಮಾಡಬೇಕು ಎಂದೇನೂ ಇಲ್ಲ. ಹಣ ಖರ್ಚು ಮಾಡದೇ ಚುನಾವಣೆ ಗೆಲ್ಲುವ ನಿಲುವನ್ನು ಉಪೇಂದ್ರ ಪ್ರತಿಪಾದಿಸಿದರು.

ಫೆ.15ರೊಳಗೆ ಕೆಪಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ:

ಸದ್ಯದಲ್ಲೇ ಎದುರಾಗಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕೆಪಿಜೆಪಿ ಎಲ್ಲಾ 224 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಮೊದಲು ಇತರ ಅಭ್ಯರ್ಥಿಗಳ ಕ್ಷೇತ್ರವನ್ನು ಅಂತಿಮಗೊಳಿಸಿ ನಂತರ ನಾನು ಯಾವ ಕ್ಷೇತ್ರದಿಂದ ಕಣಕ್ಕಿಳಿಯಬೇಕು ಎಂದು ನಿರ್ಧರಿಸುತ್ತೇನೆ. ತಿಂಗಳಾಂತ್ಯಕ್ಕೆ ಅಭ್ಯರ್ಥಿಗಳ ಪಟ್ಟಿ ಸಿದ್ಧಗೊಳ್ಳಲಿದೆ. ಅಭ್ಯರ್ಥಿಗಳ ಇಂಟರ್‌ವ್ಯೂ ಮಾಡಿ ಅದನ್ನು ಮಾಧ್ಯಮಗಳಿಗೂ ಬಿಡುಗಡೆ ಮಾಡುತ್ತೇವೆ. ಫೆ.15 ರ ಒಳಗೆ ನಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ಉಪೇಂದ್ರ ತಿಳಿಸಿದ್ರು.

ಧರ್ಮದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು:

ಎಲ್ಲಿ ಸತ್ಯ ಇಲ್ಲವೂ ಅಲ್ಲಿ ಧರ್ಮ ಬೇಕು, ಎಲ್ಲಿ ಸತ್ಯ ಇರುತ್ತದೆಯೋ ಅಲ್ಲಿ ಧರ್ಮ ಬೇಡವೆಂದು ಒಂದು ಸಿನಿಮಾದಲ್ಲಿ ಡೈಲಾಗ್ ಹೇಳಿದ್ದೇನೆ. ಸತ್ಯವೇ ದರ್ಮ, ಸತ್ಯ ಅರ್ಥವಾದರೆ ಇದೆಲ್ಲಾ ಬೇಕಾಗಿಲ್ಲ. ಚುನಾವಣಾ ಸಮಯದಲ್ಲಿ ರಾಜಕಾರಣದಿಂದಲೇ ಧರ್ಮ ಜಾತಿ ಎಲ್ಲಾ ವಿಭಜನೆ ಆಗುತ್ತಿದೆ. ಮೊದಲು ಇದನ್ನು ಮಾತನಾಡುವುದನ್ನು ಬಿಡಬೇಕು, ಮಾತಾಡಿ ಮಾತಾಡಿ ವಿವಾದವನ್ನು ದೊಡ್ಡದನ್ನಾಗಿ ಮಾಡುತ್ತಿದ್ದೇವೆ. ಅವರದ್ದು ತಪ್ಪು ಎನ್ನುವಷ್ಟು ದೊಡ್ಡವನು ನಾನಲ್ಲ. ಅವರೂ ಬದಲಾಗುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಧರ್ಮ ರಾಜಕಾರಣದ ಕುರಿತು ಉಪೇಂದ್ರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಕರುನಾಡ ಕುರುಕ್ಷೇತ್ರ

  ಪ್ರಮುಖ ನಗರಗಳು