• A
  • A
  • A
ಕಂಪನಿ ಕೆಲಸಕ್ಕೆ ಗುಡ್​ ಬೈ... ಕೃಷಿಗೆ ಹಾಯ್ ಹಾಯ್​: ಕೊಪ್ಪಳದಲ್ಲೊಬ್ಬ ಮಾದರಿ ಯುವರೈತ!

ಕೊಪ್ಪಳ: ಕಾಲೇಜು ಮೆಟ್ಟಿಲು ಹತ್ತಿದರೆ ಸಾಕು ಬಹುತೇಕರು ಹಳ್ಳಿಯಲ್ಲಿ ಕಾಲೂರೋದೇ ಇಲ್ಲ. ಇನ್ನು ಕೃಷಿಯೆಂದರೆ ಸಾಕು ಅಲ್ಲೇನಿದೆ ಎಂದು ಪೇಟೆ ಸೇರುವವರೆ ಹೆಚ್ಚು. ಇಂತಹ ಸನ್ನಿವೇಶದಲ್ಲಿ ಆ ಯುವಕ ಡಿಪ್ಲೋಮಾ ಮೆಕ್ಯಾನಿಕಲ್ ಓದಿ ಹತ್ತಾರು ಸಾವಿರ ರೂ. ಸಂಬಳ ಬರುತ್ತಿದ್ದ ಕೆಲಸ ತೊರೆದು ಕೃಷಿಯತ್ತ ಮುಖ ಮಾಡಿದ್ದಾನೆ.


ಹೌದು, ಕೃಷಿಯೇ ಮನುಷ್ಯನ ಮೂಲವೃತ್ತಿ ಎಂದರಿತುಕೊಂಡು ಕೃಷಿಯಲ್ಲಿ ತೊಡಗಿಕೊಂಡು ಕೃಷಿಯನ್ನು ಲಾಭದಾಯಕ ಕಸುಬಾಗಿಸಿಕೊಂಡಿದ್ದಾನೆ ಈ ಯುವಕ. ಆ ಮಾದರಿ ಯುವ ರೈತನ ತೋಟ ಹೇಗಿದೆ ಅನ್ನೋದಕ್ಕೆ ಈ ಸ್ಟೋರಿ ನೋಡಿ...
ಹೀಗೆ ಹೊಲದ ಬದುವನ್ನು ಸಹ ಖಾಲಿ ಬಿಡದೆ ಅಲ್ಲಿಯೂ ಒಂದಿಲ್ಲೊಂದು ಗಿಡಮರಗಳನ್ನು ನಾಟಿ ಮಾಡಿ, ಅನುಭವಿ ಕೃಷಿಕ ಅನ್ನಿಸಿಕೊಂಡಿದ್ದಾನೆ ಈ ಯುವರೈತ. ಅಂದಹಾಗೆ ಈ ಯುವಕನ ಹೆಸರು ವಿನೋದಕುಮಾರ್. ಕುಷ್ಟಗಿ ಪಟ್ಟಣದ ನಿವಾಸಿ. ಡಿಪ್ಲೋಮಾ ಮೆಕ್ಯಾನಿಕಲ್ ವ್ಯಾಸಂಗ ಮಾಡಿ ಬಳಿಕ ಖಾಸಗಿ ಕಂಪೆನಿಯಲ್ಲಿ ಪ್ರತಿ ತಿಂಗಳಿಗೆ 20 ಸಾವಿರ ರೂ. ವೇತನಕ್ಕೆ ಕೆಲಸ ಮಾಡುತ್ತಿದ್ದ. ಕೃಷಿಯ ಮೇಲಿನ ತುಡಿತ ವಿನೋದನನ್ನು ಆ ಕೆಲಸದಲ್ಲಿ ಮುಂದುವರೆಯುವುದಕ್ಕೆ ಬಿಡಲಿಲ್ಲ. ಹೀಗಾಗಿ, ವಿನೋದಕುಮಾರ್ ಆ ಕೆಲಸಕ್ಕೆ ಗುಡ್​ ಬೈ ಹೇಳಿ ನೇರವಾಗಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.


ಕೃಷಿಭೂಮಿಯ ಸಮಗ್ರ ಬಳಕೆ:

ತಮ್ಮ ಪಿತ್ರಾರ್ಜಿತ ಆಸ್ತಿ 6 ಎಕರೆ ಭೂಮಿಯಲ್ಲಿ ಏನಾದರೂ ಸಾಧಿಸಬೇಕೆಂಬ ಹೆಬ್ಬಯಕೆಯಿಂದ, ಈಗ ಸುಂದರ ತೋಟವನ್ನಾಗಿ ಮಾಡಿದ್ದಾರೆ. ವಿನೋದ್ ಕುಮಾರ್ ಅವರ ಪರಿಶ್ರಮದಿಂದ ಈಗ ಅವರ 6 ಎಕರೆ ಜಮೀನಿನಲ್ಲಿ ನಾನಾ ರೀತಿಯ ಕೃಷಿಯ ಜೊತೆಗೆ ಉಪ ಕಸುಬುಗಳನ್ನು ಜೋರಾಗಿ ನಡೆಸುತ್ತಿದ್ದಾರೆ. ಬೋರ್​ವೆಲ್ ಮೂಲಕ ಹನಿ ನೀರಾವರಿ ಅಳವಡಿಸಿಕೊಂಡಿರುವ ವಿನೋದ್ ಅವರು, ಮಳೆ ನೀರು ಕೊಯ್ಲು, ಅಂತರ್ಜಲ ವೃದ್ಧಿಗಾಗಿ ಹೊಂಡವನ್ನು ನಿರ್ಮಾಣ ಮಾಡಿ ಕೃಷಿಯನ್ನು ಮಾಡುತ್ತಿದ್ದಾರೆ. ರೇಷ್ಮೆ ಬೆಳೆ ಸೇರಿದಂತೆ ಅನೇಕ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಮೂಲಕ ಉತ್ತಮ ಇಳುವರಿ ತೆಗೆಯುತ್ತಿದ್ದಾರೆ.

ವಿನೋದ್ ಕುಮಾರ್ ಅವರ ಕೃಷಿಭೂಮಿ ಮತ್ತಷ್ಟು ಗಮನ ಸೆಳೆಯುವುದು ಅವರ ಜಮೀನಲ್ಲಿರುವ ಬದುಗಳಿಂದ. ಈ ಬದುಗಳನ್ನು ಸಹ ಅವರು ಬಳಕೆ ಮಾಡಿಕೊಂಡಿದ್ದಾರೆ. ಜಮೀನಿನಲ್ಲಿ ಎಲ್ಲ ಬಗೆಯ ಮರಗಳನ್ನು ಸಹ ಬೆಳೆಸಿದ್ದಾರೆ. ತೇಗ, ಹೊಂಗೆ, ಹೆಬ್ಬೇವು, ಪೇರಲ, ತೆಂಗು ಸೇರಿದಂತೆ ತರಹೇವಾರು ಮರಗಳನ್ನು ಬೆಳೆಸಿದ್ದಾರೆ. ಇದು ಅರಣ್ಯ ಕೃಷಿಯ ಒಂದು ಭಾಗವಾಗಿದ್ದು, ಮುಂದಿನ ದಿನಗಳಲ್ಲಿ ಅವು ಅವರಿಗೆ ಉತ್ತಮ ಆದಾಯ ನೀಡಬಲ್ಲವು. ಇನ್ನು ಕುರಿ ಸಾಕಾಣಿಕೆ, ಮೀನು ಸಾಕಾಣಿಕೆಯನ್ನು ಸಹ ವಿನೋದ್ ಕುಮಾರ್ ಉಪ ಕಸುಬಾಗಿ ಮಾಡುತ್ತಿದ್ದಾರೆ. ಹೊಂಡವೊಂದರಲ್ಲಿ 5 ಸಾವಿರ ಮೀನು ಮರಿಗಳನ್ನು ಬಿಟ್ಟಿದ್ದು, ಈಗಾಗಲೇ ಅವು ದೊಡ್ಡವಾಗಿವೆ. ಒಳ್ಳೆಯ ಆದಾಯ ತರುವ ನಿರೀಕ್ಷೆಯನ್ನು ಹುಟ್ಟಿಸಿವೆ.

ತಂದೆಯಿಂದ ಸಾಥ್​:

ನಿವೃತ್ತ ಸೈನಿಕರಾಗಿರುವ ವಿನೋದ್ ಕುಮಾರ್ ಅವರ ತಂದೆ ಶಂಕ್ರಪ್ಪ, ತಮ್ಮ ಮಗನ ಈ ಕೃಷಿ ಚಟುವಟಿಕೆಗೆ ಸಾಥ್ ನೀಡಿದ್ದಾರೆ. ಕೃಷಿಯಲ್ಲಿ ನಮ್ಮ ಮಗ ತೊಡಗುತ್ತೇನೆ ಎಂದಾಗ ಅವನಿಗೆ ಬೇಕಾದ ನೆರವನ್ನು ನೀಡಿದೆವು. ಈಗ ಅವನು ಕೃಷಿಯಲ್ಲಿ ಅನುಭವಿ ಕೃಷಿಕನಂತೆ ಕೆಲಸ ಮಾಡುತ್ತಾನೆ. ಅದರಲ್ಲಿಯೇ ಅವನು ಉತ್ತಮ ಬದುಕನ್ನು ಕಟ್ಟಿಕೊಳ್ಳುತ್ತಾನೆ ಎನ್ನುತ್ತಾರೆ ವಿನೋದ್ ತಂದೆ ಶಂಕರಪ್ಪ.

ನನಗೆ ಮೊದಲಿನಿಂದಲೂ ಕೃಷಿಯತ್ತ ಒಲವು ಇತ್ತು. ನನ್ನ ಸ್ನೇಹಿತರು ಸಹ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಕೃಷಿಯಿಂದಲೇ ಏನಾದರೂ ಸಾಧನೆ ಮಾಡಬೇಕು ಎಂದು ಕೃಷಿಯಲ್ಲಿ ತೊಡಗಿಕೊಂಡು ಕೃಷಿಯ ಜೊತೆಗೆ ಆದಾಯಕ್ಕೆ ಉಪಕಸುಬುಗಳನ್ನು ಮಾಡುತ್ತಿರುವೆ. ಇನ್ನು ಹೈನುಗಾರಿಕೆ, ಜೇನು ಸಾಕಾಣಿಕೆಗೆ ಪ್ಲಾನ್ ಮಾಡಲಾಗಿದ್ದು, ಅದನ್ನು ಶೀಘ್ರದಲ್ಲೇ ಮಾಡುವ ಯೋಚನೆ ಇದೆ ಎನ್ನುತ್ತಾರೆ ವಿನೋದ್.

ನಗರೀಕರಣ ಹಾಗೂ ಇಂದಿನ ಬಿಡುವಿಲ್ಲದ ಒತ್ತಡದ ಜೀವನದಿಂದ ಅನೇಕರು ಗ್ರಾಮೀಣ ಪ್ರದೇಶದತ್ತ ಮುಖ ಮಾಡುತ್ತಿದ್ದಾರೆ. ಮನುಷ್ಯನ ಮೂಲ ವೃತ್ತಿಯಾಗಿರುವ ಕೃಷಿಯತ್ತ ಒಲವು ತೋರುತ್ತಿರೋದು ಒಳ್ಳೆಯ ಬೆಳವಣಿಗೆಯೇ ಸರಿ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು