• A
  • A
  • A
ಮೈಸೂರು ಪಾಕ್ ಹುಟ್ಟಿದ್ದೇಗೆ... ವಿಶ್ವಪ್ರಸಿದ್ದ ಈ 'ಪಾಕ' ಹಿಂದೆ ಮೈಸೂರು ಸೇರಿಸಿದವರಾರು?

ಮೈಸೂರು: ಸಾಂಸ್ಕತಿಕ ನಗರಿ ಮೈಸೂರು ಕಲೆ, ಸಂಸ್ಕತಿ, ಶಿಕ್ಷಣ ಹೀಗೆ ನಾನಾ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದೆ. ಅದು ಸಿಹಿ ತಿಂಡಿಯ ವಿಚಾರದಲ್ಲೂ ಬಿಟ್ಟಿಲ್ಲ. ಸಿಹಿ ತಿಂಡಿ ಎಂದ ತಕ್ಷಣ ಥಟ್ಟನೆ ಹೊಳೆಯುವ ತಿಂಡಿಯೇ 'ಮೈಸೂರು ಪಾಕ್'. ಆ ಹೆಸರು ಹೇಗೆ ಬಂತು ಗೊತ್ತಾ! ಹಾಗಿದ್ರೆ ಈ ಸ್ಟೋರಿ ಓದಿ...


ಮೈಸೂರು ಪಾಕ್​, ಮೈಸೂರು ಪೇಟ, ಮೈಸೂರು ಸಿಲ್ಕ್, ಮೈಸೂರು ಮಲ್ಲಿಗೆ, ಮೈಸೂರು ವೀಳ್ಯದೆಲೆ.... ಹೀಗೆ ಮೈಸೂರು ಎಂಬ ಹೆಸರಿನಲ್ಲಿಯೇ ಪ್ರಸಿದ್ಧಿ ಪಡೆದ ಹಲವು ವಿಶೇಷಗಳಿವೆ. ಅದರಲ್ಲಿ ಮೈಸೂರು ಪಾಕ್​ ಅಂದ ತಕ್ಷಣ ಹಲವರ ಬಾಯಲ್ಲಿ ನೀರೂರುತ್ತದೆ. ಅಂತಹ ವಿಶೇಷ ಸಿಹಿತಿಂಡಿಯ ಇತಿಹಾಸವನ್ನು ಈನಾಡು ಇಂಡಿಯಾ ನಿಮ್ಮ ಮುಂದಿಡುತ್ತಿದೆ.
ಮೈಸೂರು ಪಾಕ್​, ಕನ್ನಡನಾಡಿನ ಜನಪ್ರಿಯ ಸಿಹಿ ತಿಂಡಿ. ದೇಶ-ವಿದೇಶಗಳಲ್ಲಿ ಇದರ ಖ್ಯಾತಿ ಹಬ್ಬಿದೆ. ಅಂದ ಹಾಗೆ, ಈ ಸಿಹಿ ತಿಂಡಿ ತಯಾರಿಸಲು ಆರಂಭಿಸಿದ ಇತಿಹಾಸವು ಕೂಡ ತುಂಬಾನೇ ಕುತೂಹಲಕಾರಿಯಾಗಿದೆ.


ಹೌದು, 1935ರಲ್ಲಿ ಮೈಸೂರು ಅರಮನೆಯ ಪ್ರಧಾನ ಅಡುಗೆ ಭಟ್ಟರಾದ ಕಾಕಸುರ ಮಾದಪ್ಪ, ಅಂದಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಊಟ ತಯಾರಿಸುತ್ತಿದ್ದ ವ್ಯಕ್ತಿ. ಮಹಾರಾಜರು ಹೊರಗಡೆ ಸುತ್ತಾಡಿ ಬರುವ ಮುನ್ನ ಇಂದು ನಾನು ಏನಾದರೂ ವಿಶೇಷ ತಿಂಡಿ ಸಿದ್ಧಪಡಿಸಬೇಕು ಎಂಬ ಚಟಪಟಿಕೆ ಕಾಕಸುರ ಮಾದಪ್ಪನದು.

ಯಾವ ಸಿಹಿತಿಂಡಿ ಮಾಡಬೇಕು ಎಂದು ಚಿಂತೆಗೀಡಾಗಿದ ಭಟ್ಟರು, ತಲೆಗೆ ಅದೇನೊ ಹೊಳೆದು, ಕಡಲೆ ಹಿಟ್ಟು, ತುಪ್ಪ, ಸಕ್ಕರೆ ಸೇರಿಸಿ ಒಂದು ಪಾಕಪ್ರಯೋಗ ಮಾಡಿ, ಏನೋ ಮಾಡಲು ಹೋಗಿ ಇತಿಹಾಸಕ್ಕೆ 'ಪಾಕ' ನೀಡಿದರು. ಅರಮನೆಗೆ ಬಂದ ಮಹಾರಾಜರು ಊಟಕ್ಕೆ ಕುಳಿತರು. ದೊರೆಗೆ ತಾನು ತಯಾರು ಮಾಡಿದ ಪಾಕವನ್ನ ಅಳುಕಿನಿಂದಲೇ ಮುಂದಿಟ್ಟರು ಮಾದಪ್ಪ.

ಸಿಹಿ ತಿಂಡಿಯನ್ನ ಚಪ್ಪರಿಸಿದ ಮಹಾರಾಜರು ಇದೇನಿದು ಹೊಸ ರುಚಿ! ಇಷ್ಟೊಂದು ಸ್ವಾದಿಷ್ಟವಾಗಿದೆ. ಈ ಸಿಹಿತಿಂಡಿಯ ಹೆಸರೇನು ಎಂದರಂತೆ. ತಬ್ಬಿಬ್ಬಾದ ಮಾದಪ್ಪನವರು ಸಿಹಿ ತಿಂಡಿಯ ಹೆಸರು ನನಗೂ ಕೂಡ ತಿಳಿದಿಲ್ಲವೆಂದು ತಲೆ ಅಲ್ಲಾಡಿಸಿದರಂತೆ. ಈ ತಿಂಡಿಯನ್ನು ಹೇಗೆ ಮಾಡಿದೆ ಎಂದು ಮತ್ತೆ ಮಹಾರಾಜರು ಪ್ರಶ್ನೆ ಮಾಡಿದ್ದರಂತೆ.

ಅದಕ್ಕೆ ಭಟ್ಟರು 'ಪಾಕ'ದಿಂದ ಮಾಡಿದ್ದು ಎಂದು ಮೆಲುಧ್ವನಿಯಿಲ್ಲಿ ಹೇಳಿದರು. ಈ ಮಾತಿನಿಂದ ಹರ್ಷರಾದ ನಾಲ್ವಡಿ ಕೃಷ್ಣರಾಜ ಒಡೆಯರ್, "ಓ ಪಾಕದಿಂದ ಮಾಡಿದ್ದ, ಇದಕ್ಕೆ ಮೈಸೂರು ಎಂದು ಹೆಸರು ಸೇರಿಸೋಣ" ಎಂದರಂತೆ.

ಅಂದಿನ 'ಮೈಸೂರು ಪಾಕ' ಇಂದು 'ಮೈಸೂರು ಪಾಕ್' ಆಗಿದೆ. ಅಂದಿನಿಂದ ಇಂದಿನ ವರೆಗೂ ಮೈಸೂರು ಎಂದಾಕ್ಷಣವೇ ಕೆಲವರ ಬಾಯಲ್ಲಿ ನೀರೂರಿಸುವ 'ಮೈಸೂರು ಪಾಕ್' ಆಗಿ ಉಳಿದಿದೆ. ಅರಮನೆಯಲ್ಲಿ ಹುಟ್ಟಿದ ಈ ಸಿಹಿ ತಿಂಡಿ ಶುಭ ಸಮಾರಂಭಗಳಿಗೂ ಕಾಲಿಟ್ಟು, ವಿಶ್ವವಿಖ್ಯಾತಿ ಪಡೆದಿದೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಕರುನಾಡ ಕುರುಕ್ಷೇತ್ರ

  ಪ್ರಮುಖ ನಗರಗಳು