• A
  • A
  • A
ಮನವಿಗೆ ಸ್ಪಂದಿಸಿ ಉದ್ಯೋಗ ಕೊಟ್ಟ ಸಿಎಂ; ಮಗನಿಗೆ ಕುಮಾರಣ್ಣನ ಹೆಸರಿಡುವೆ ಎಂದ ಫಲಾನುಭವಿ!

ದಾವಣಗೆರೆ: ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಜನತಾ ದರ್ಶನದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ವಿಕಲಾಂಗ ಮಹಿಳೆಯ ಮನವಿಗೆ ಸ್ಪಂದಿಸಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಉದ್ಯೋಗ ನೀಡಿದ್ದಾರೆ.


ಅಪಘಾತದಲ್ಲಿ ಕೈ ಕಳೆದುಕೊಂಡು ತಾನು ಅನುಭವಿಸುತ್ತಿರುವ ಸಮಸ್ಯೆಯನ್ನು ಆ ಮಹಿಳೆ ತೋಡಿಕೊಂಡಾಗ, ತಕ್ಷಣವೇ ಮುಖ್ಯಮಂತ್ರಿಗಳು ತಮ್ಮ ಕಾರ್ಯಾಲಯದಲ್ಲಿ ಕೆಲಸ ನೀಡಲು ಹೇಳಿದರು.


ಆದರೆ ತಾನು ದಾವಣಗೆರೆ ನಿವಾಸಿಯಾಗಿದ್ದು, ಅಲ್ಲಿಯೇ ಕೆಲಸ ನೀಡಿದರೆ ಉತ್ತಮವಾಗುತ್ತದೆ ಎಂಬ ಮನವಿಗೆ ಸ್ಪಂದಿಸಿ ದಾವಣಗೆರೆಯ ವಾರ್ತಾ ಇಲಾಖೆಯಲ್ಲಿ ಟೈಪಿಸ್ಟ್ ಹುದ್ದೆ ನೀಡಲು ತಿಳಿಸಿದರು. ಮುಖ್ಯಮಂತ್ರಿಗಳ ಆದೇಶದಂತೆ ಶುಕ್ರವಾರ ವಾರ್ತಾ ಇಲಾಖೆಗೆ ಬಂದು ಕೆಲಸಕ್ಕೆ ಸೇರಿಕೊಂಡಿದ್ದಾರೆ ವಿನೋಭಾ ನಗರದ ನಿವಾಸಿ ಶೈಲಾ.

ಎಡಗೈಯಿಂದ ಟೈಪಿಂಗ್:

ದಾವಣಗೆರೆ ನಗರದ ವಿನೋಭಾ ನಗರದ ನಿವಾಸಿ ಶೈಲಾ ಸದ್ಯ ತಂದೆ ಚನ್ನಪ್ಪ, ತಾಯಿ ದಾಕ್ಷಾಯಣಿ ಹಾಗೂ ತನ್ನ ಮೂವರು ಪುತ್ರರೊಂದಿಗೆ ಇದ್ದಾರೆ. ಕಳೆದ 25 ವರ್ಷಗಳ ಹಿಂದೆ ಕುಟುಂಬದ ಸದಸ್ಯರೊಂದಿಗೆ ಚನ್ನಗಿರಿಯಲ್ಲಿ ನಡೆದ ಮದುವೆಗೆ ಹೋಗಿ ದಾವಣಗೆರೆಗೆ ಲಾರಿಯಲ್ಲಿ ವಾಪಾಸ್ಸಾಗುತ್ತಿದ್ದರು. ಆಗ ಮೇಳ್ಳಕಟ್ಟೆ ಎಂಬಲ್ಲಿ ಲಾರಿ ನಿಂತಾಗ ಅದು ವಾಲಿ ಪಕ್ಕದಲ್ಲಿದ್ದ ತಗಡಿನ ಮನೆಗೆ ಡಿಕ್ಕಿ ಹೊಡೆದಿತ್ತು. ಈ ಸಂದರ್ಭದಲ್ಲಿ ಶೈಲಾರ ಬಲಗೈ ತುಂಡಾಗಿತ್ತು. ಇದಾದ ನಂತರ ತಮ್ಮ ಎಡಗೈಯಿಂದಲೇ ಎಲ್ಲಾ ಕೆಲಸವನ್ನು ಕಲಿತರು. ಬರವಣಿಗೆ, ಕಂಪ್ಯೂಟರ್ ಸಾಫ್ಟ್‌ವೇರ್, ಹಾರ್ಡ್‍ವೇರ್ ತರಬೇತಿ ಪಡೆದರು.

ಎಡಗೈಯೊಂದರಿಂದಲೇ ಟೈಪ್ ಮಾಡುವುದನ್ನು ಕಲಿತರು. ನಂತರ ಕೆಲಸಕ್ಕೆ ಅಲೆದರೂ ಎಲ್ಲೂ ಕೆಲಸ ಸಿಗಲಿಲ್ಲ. ಒಂದೇ ಕೈಯಿಂದ ನೀವೇನು ಕೆಲಸ ಮಾಡುತ್ತೀರಿ ಎಂದು ಹೇಳಿ ವಾಪಸ್ಸು ಕಳುಹಿಸುತ್ತಿದ್ದರಂತೆ. ಕೆಲಸವಿಲ್ಲದೆ ತಂದೆ-ತಾಯಿ ಹಾಗೂ ಮೂರು ಮಕ್ಕಳೊಂದಿಗೆ ಮುಂದೇನು ಎಂಬ ಯೋಚನೆಯಲ್ಲಿ ಮನೆಯಲ್ಲೇ ಇದ್ದರು. ಮುಖ್ಯಮಂತ್ರಿಗಳಿಂದ ಜನತಾ ದರ್ಶನ ಇದೆ ಎಂಬುದನ್ನು ಟಿವಿಯಲ್ಲಿ ನೋಡಿ, ಮೊನ್ನೆ ನಡೆದ ಮುಖ್ಯಮಂತ್ರಿಗಳ ಜನತಾ ದರ್ಶನದಲ್ಲಿ ಭಾಗವಹಿಸಿದ್ದೆ. ಕುಮಾರಸ್ವಾಮಿ ಅವರ ಹತ್ತಿರ ತನ್ನ ಸಮಸ್ಯೆಯನ್ನು ತೋಡಿಕೊಂಡಾಗ ಕೂಡಲೇ ಕೆಲಸ ದೊರಕಿಸಿದ್ದಾರೆ. ನನ್ನ ಎರಡೂವರೆ ತಿಂಗಳ ಮಗುವಿನೊಂದಿಗೆ ವಾರ್ತಾ ಇಲಾಖೆಗೆ ಬಂದು ಕೆಲಸಕ್ಕೆ ಹಾಜರಾಗಿದ್ದೇನೆ ಎಂದು ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರಿಗೆ ಶೈಲಾ ಹೇಳಿದರು.

ಮಗುವಿಗೆ ಕುಮಾರಸ್ವಾಮಿ ಹೆಸರು:
ಜನತಾ ದರ್ಶನದಲ್ಲಿ ಮುಖ್ಯಮಂತ್ರಿಗಳ ಭೇಟಿ ಆಗುವ ಭಾಗ್ಯ ದೊರೆಯುತ್ತದೋ ಇಲ್ಲವೋ ಎಂಬ ಅಳುಕಿನಿಂದಲೇ ಬೆಂಗಳೂರಿಗೆ ಹೋಗಿದ್ದೆ. ಕೊನೆಗೂ ಅವರ ದರ್ಶನ ಆಯಿತು. ನನ್ನ ಸಮಸ್ಯೆಯನ್ನು ಅವರ ಮುಂದೆ ಹೇಳಿದೆ. ಎಡಗೈ ಒಂದರಿಂದಲೇ ಹೇಗೆ ಕೆಲಸ ಮಾಡುತ್ತಿ ಎಂದು ಹೇಳಿ, ಅಲ್ಲಿಯೇ ಇದ್ದ ಕಂಪ್ಯೂಟರ್‌ನಿಂದ ಟೈಪ್ ಮಾಡಲು ಹೇಳಿದರು. ಒಂದು ತಪ್ಪು ಇಲ್ಲದಂತೆ ಟೈಪ್ ಮಾಡಿ ಕೊಟ್ಟೆ. ಆಗ ಮುಖ್ಯಮಂತ್ರಿಗಳು ತಮ್ಮ ಕಚೇರಿಯಲ್ಲಿಯೇ ಕೂಡಲೇ ಕೆಲಸ ನೀಡಲು ಅಲ್ಲಿನ ಅಧಿಕಾರಿಗಳಿಗೆ ತಿಳಿಸಿದರು.

ಆದರೆ ನನ್ನ ಸಮಸ್ಯೆಗಳನ್ನು ಅವರ ಮುಂದೆ ತೋಡಿಕೊಂಡು, ದಾವಣಗೆರೆ ನಗರದಲ್ಲಿಯೇ ಕೆಲಸ ನೀಡಿದರೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದೆ. ಆಗ ಇಲ್ಲಿನ ವಾರ್ತಾ ಇಲಾಖೆಯಲ್ಲಿ ಟೈಪಿಸ್ಟ್ ಆಗಿ ಕೆಲಸಕ್ಕೆ ಸೇರಿಕೊಳ್ಳಲು ತಿಳಿಸಿದರು. ಅವರ ಸೂಚನೆಯಂತೆ ಕಚೇರಿಗೆ ಬಂದು ಕೆಲಸಕ್ಕೆ ಸೇರಿಕೊಂಡಿದ್ದೇನೆ. ನನ್ನ ಸಮಸ್ಯೆಯನ್ನು ಆಲಿಸಿದ್ದು, ನನ್ನ ಎರಡೂವರೆ ತಿಂಗಳ ಮಗುವನ್ನು ಮುಖ್ಯಮಂತ್ರಿಗಳು ಎತ್ತಿ ಮುದ್ದಾಡಿದ್ದು ಜೀವನದಲ್ಲಿ ಮರೆಯಲಾರೆ. ಇನ್ನೂ ಹೆಸರಿಡದ ಈ ನನ್ನ ಮುಗುವಿಗೆ ಕುಮಾರಸ್ವಾಮಿ ಎಂದು ಹೆಸರಿಡುತ್ತೇನೆ ಎಂದರು.


CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಕರುನಾಡ ಕುರುಕ್ಷೇತ್ರ

  ಪ್ರಮುಖ ನಗರಗಳು