• A
  • A
  • A
ಫಲಿತಾಂಶ ಪ್ರಕಟ ವಿಳಂಬ ಸಾಧ್ಯತೆ... ಕಾರಣ ತಿಳಿಸಿದ ಸಂಜೀವ್‌ ಕುಮಾರ್‌

ಬೆಂಗಳೂರು: ರಾಜ್ಯದ ಎಲ್ಲಾ ಮತಗಟ್ಟೆಗಳಲ್ಲಿ ವಿವಿಪ್ಯಾಟ್ ಮತ್ತು ಇವಿಎಂಗಳನ್ನು ಬಳಸಿದ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟಗೊಳ್ಳುವುದು ವಿಳಂಬವಾಗುವ ಸಾಧ್ಯತೆಯಿದೆ. ಮೊದಲ ಫಲಿತಾಂಶ ದೊರೆಯಲು ಕನಿಷ್ಠ ಐದು ಗಂಟೆಗಳ ಎಣಿಕೆ ಅಗತ್ಯವಾಗಿದೆ. ಒಟ್ಟಾರೆ ಫಲಿತಾಂಶ ಲಭ್ಯವಾಗಲು ಗರಿಷ್ಠ 8 ಗಂಟೆಗಳ ಅವಶ್ಯಕತೆಯಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.


ವಿಕಾಸಸೌಧದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ವಿವಿಪ್ಯಾಟ್‌ಗಳನ್ನ ದೇಶದಲ್ಲಿ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ಹಾಗೆಯೇ ಮತ ಎಣಿಕೆ ನಡೆಯುವಾಗ ಪ್ರತಿ ಮತ ಕ್ಷೇತ್ರಕ್ಕೆ ಒಂದರಂತೆ ಈ ವಿವಿಪ್ಯಾಟ್ ಯಂತ್ರಗಳನ್ನು ತೆರೆದು ಅಲ್ಲಿರುವ ಮುದ್ರಿತ ಪ್ರತಿಗಳನ್ನು ಲೆಕ್ಕ ಹಾಕಿ ಮತ ಯಂತ್ರದಲ್ಲಿ ಬರುವ ಫಲಿತಾಂಶವನ್ನು ಇದರೊಂದಿಗೆ ತಾಳೆ ಮಾಡಲಾಗುವುದು ಎಂದರು.


ರಾಜ್ಯದಲ್ಲಿ ಒಟ್ಟು 2,65,731 ಅಂಚೆ ಮತ ಪತ್ರಗಳನ್ನು ಮತಗಟ್ಟೆಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ನೀಡಲಾಗಿತ್ತು. ಈ ಪೈಕಿ 1,06,891 ಮಂದಿ ಅಂಚೆ ಮತ ಚಲಾಯಿಸಿದ್ದಾರೆ. ನಾಳೆ ಮತ ಎಣಿಕೆ ನಡೆಯುವಾಗ ಮೊದಲು ಅಂಚೆ ಮತಪತ್ರಗಳನ್ನು ಲೆಕ್ಕ ಹಾಕಲಾಗುವುದು. ಅಂಚೆ ಮತಪತ್ರಗಳನ್ನು ಎಣಿಸಲು ವಿಶೇಷ ಟೇಬಲ್‌ ವ್ಯವಸ್ಥೆ ಮಾಡಲಾಗಿದ್ದು, 292 ಕ್ಯೂಆರ್ ಕೋಡ್ ಸ್ಕ್ಯಾನರ್‌ಗಳನ್ನು ಬಳಸಿ ಅಂಚೆ ಮತಪತ್ರಗಳನ್ನು ಎಣಿಸಲಾಗುವುದು. ಇದಕ್ಕಾಗಿ 222 ಮಂದಿಯನ್ನು ನಿಯೋಜಿಸಲಾಗಿದೆ ಎಂದರು.

ಮತ ಎಣಿಕೆ ಕೇಂದ್ರದಲ್ಲಿ ನಡೆಯುವ ಚಿತ್ರಗಳನ್ನು ನಿಗದಿತ ಸಮಯದಲ್ಲಿ ಪಡೆದುಕೊಳ್ಳಲು ಅನುವಾಗುವಂತೆ ವೆಬ್‌ಕಾಸ್ಟಿಂಗ್ ಮಾಡಲಾಗುತ್ತಿದೆ. ಪ್ರತಿ ಎಣಿಕೆ ಹಾಲ್‌ನಲ್ಲಿ 7 ವೆಬ್ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪ್ರತಿ ಮತ ಎಣಿಕೆ ಕೇಂದ್ರದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಫಲಿತಾಂಶವನ್ನು ವರದಿ ಮಾಡಲು ಅನುಕೂಲವಾಗುವಂತೆ ದೂರವಾಣಿ ಮತ್ತು ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಸಂಪರ್ಕ, ಕಂಪ್ಯೂಟರ್, ಪ್ರಿಂಟರ್ ಮತ್ತು ಟಿವಿ ಹಾಗೂ ಎಲ್ಇಡಿ ಪರದೆಯಲ್ಲಿ ಪ್ರತಿ ಸುತ್ತಿನ ಫಲಿತಾಂಶಗಳನ್ನು ಪ್ರದರ್ಶಿಸಲಾಗುವುದು. ಪ್ರತಿ ಮತಕ್ಷೇತ್ರದಲ್ಲಿ ಪ್ರತಿ ಸುತ್ತಿನ ಮತ ಎಣಿಕೆಯನ್ನು ಧ್ವನಿ ವರ್ಧಕಗಳ ಮೂಲಕ ಘೋಷಣೆ ಮಾಡಲಾಗುವುದು ಎಂದು ಹೇಳಿದರು.

ದಾಖಲೆ ಮತದಾನ: ಈ ಬಾರಿ ಶೇ. 72.36ರಷ್ಟು ದಾಖಲೆ ಮತದಾನವಾಗಿದ್ದು, ಇದು ಇದುವರೆಗಿನ ಚುನಾವಣೆಗಳಲ್ಲೇ ಸರ್ವಕಾಲಿಕ ದಾಖಲೆಯಾಗಿದೆ,. 1978 ರ ಚುನಾವಣೆಯಲ್ಲಿ ಶೇ. 71.90 ರಷ್ಟು ಮತದಾನವಾಗಿದ್ದು, ಇದುವರೆಗಿನ ದಾಖಲೆ ಎನಿಸಿತ್ತು. ಈ ಬಾರಿ ಅಂಚೆ ಮತಪತ್ರ ಸೇರಿ ಶೇ. 72.36 ಕ್ಕೆ ಏರಿಕೆಗೊಂಡಿದೆ. ಅಂಚೆ ಮತಪತ್ರಗಳನ್ನು ಹೊರತುಪಡಿಸಿ ಶೇ. 71.91 ರಷ್ಟು ಮತದಾನವಾಗಿದೆ ಎಂದು ಸಂಜೀವ್ ಕುಮಾರ್ ತಿಳಿಸಿದರು.

ರಾಜ್ಯದಲ್ಲಿ ದಾಖಲೆ ಪ್ರಮಾಣದಲ್ಲಿ ಮತದಾನ ಮಾಡಿದ ಎಲ್ಲಾ ಮತದಾರರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಹಾಗೆಯೇ, ಬೆಂಗಳೂರಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮತದಾನ ನಡೆಯದಿರುವುದು ಬೇಸರ ಮೂಡಿಸಿದೆ. ಬೆಂಗಳೂರಿನಲ್ಲಿ ಮುಂದಿನ ದಿನಗಳಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸಲು ಅನುವಾಗುವಂತೆ ಆಯೋಗದ ವತಿಯಿಂದ ಸಮೀಕ್ಷೆಗಳನ್ನು ಕೈಗೊಂಡು ಸಮೀಕ್ಷಾ ವರದಿಗಳನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಒಟ್ಟು 5,06,90,533 ಮತದಾರರಿದ್ದರು. ಈ ಪೈಕಿ 2,56,75,579 ಮಂದಿ ಪುರುಷರು ಹಾಗೂ 2,50,09,904 ಮಂದಿ ಮಹಿಳೆಯರು ಹಾಗೂ 5,050 ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದರು. ಇವರುಗಳ ಪೈಕಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 1,88,04,794 ಮಂದಿ ಪುರುಷರು (ಶೇ. 73.24) ಹಾಗೂ 1,77,77,039 ಮಂದಿ ಮಹಿಳೆಯರು (ಶೇ. 71.08) ಹಾಗೂ 294 ಲಿಂಗತ್ವ ಅಲ್ಪಸಂಖ್ಯಾತರು ಮತ ಚಲಾಯಿಸಿದ್ದಾರೆ. ಒಟ್ಟಾರೆಯಾಗಿ 3,65,82,127 ಮಂದಿ 222 ಮತಕ್ಷೇತ್ರಗಳಲ್ಲಿ ಮತ ಚಲಾಯಿಸಿದ್ದಾರೆ. ರಾಮನಗರದಲ್ಲಿ ಅತೀ ಹೆಚ್ಚು ಅಂದರೆ ಶೇ. 84.55 ರಷ್ಟು ಮತದಾನ ನಡೆದಿದೆ. ನಂತರ ಎರಡನೇ ಸ್ಥಾನದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಿದೆ. ಇಲ್ಲಿ ಶೇ. 84.19ರಷ್ಟು ಮತದಾನವಾಗಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರು ಗ್ರಾಮಾಂತರದಲ್ಲಿ ಶೇ. 84.03 ರಷ್ಟು ಮತದಾನವಾಗಿದ್ದು, ಮೂರನೇ ಸ್ಥಾನದಲ್ಲಿದೆ. 2013 ರಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ ಶೇ. 57.33 ರಷ್ಟು ಮತದಾನವಾಗಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಮತದಾರರನ್ನು ವಿಶೇಷವಾಗಿ ಅಭಿನಂದಿಸುತ್ತೇನೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಎನಿಸಿದ ಶೇ. 85.62 ರಷ್ಟು ಪುರುಷರು ಮತ ಚಲಾಯಿಸಿದ್ದಾರೆ. ರಾಮನಗರದಲ್ಲಿ ಶೇ. 83.63 ರಷ್ಟು ಮಹಿಳೆಯರು ಮತ ಚಲಾಯಿಸುವ ಮೂಲಕ ರಾಜ್ಯದಲ್ಲೇ ಅತೀ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ಮತ ಚಲಾಯಿಸಿದ ಜಿಲ್ಲೆ ಎನಿಸಿದೆ. ಬೆಂಗಳೂರು ನಗರದಲ್ಲಿ ಶೇ. 54.27 ರಷ್ಟು ಮತದಾನವಾಗಿದೆ. ಇದು ಒಟ್ಟಾರೆಯಾಗಿ ಕಡಿಮೆ ಮತದಾನವಾಗಿದೆ ಎಂದು ಹೇಳಿದರು.

ಮತ ಎಣಿಕೆ ಕೇಂದ್ರದೊಳಗೆ ಪ್ರವೇಶಿಸಲು ಪಾಲಿಸಬೇಕಾದ ನಿಯಮಗಳು: ಮತ ಎಣಿಕೆ ಕೇಂದ್ರದ ಒಳಗಿರುವ ಪರಿಮಿತಿಯೊಳಗೆ ಈ ಕೆಳಕಂಡ ಶಿಷ್ಟಾಚಾರ ಪಾಲಿಸದೆ ಯಾರೊಬ್ಬರಿಗೂ ಪ್ರವೇಶಿಸಲು ಅವಕಾಶ ನೀಡುವುದಿಲ್ಲ. ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡುವ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವೀಕ್ಷಕರು, ಅಭ್ಯರ್ಥಿಗಳು ಅಥವಾ ಅವರ ಏಜೆಂಟರುಗಳು ಸೇರಿದಂತೆ ಇನ್ಯಾವುದೇ ವ್ಯಕ್ತಿಗಳು ಲಾಗ್ ಪುಸ್ತಕದಲ್ಲಿ ಹೆಸರು, ವಿಳಾಸ, ಸಮಯ, ದಿನಾಂಕ, ಅವಧಿ ನಮೂದಿಸಿ ಸಹಿ ಮಾಡಿದ ನಂತರವೇ ಒಳಗೆ ಪ್ರವೇಶಿಸಲು ಅವಕಾಶವಿರುತ್ತದೆ. ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡುವ ಪ್ರತಿಯೊಬ್ಬರನ್ನೂ ಕೇಂದ್ರ ಸಶಸ್ತ್ರ ಮೀಸಲು ಪಡೆಯವರು ವಿಡಿಯೋ ಚಿತ್ರೀಕರಿಸುತ್ತಾರೆ ಎಂದು ವಿವರಿಸಿದರು.

ಇವಿಎಂಗಳನ್ನು ಇರಿಸಿರುವ ಆವರಣದೊಳಗೆ ಅಧಿಕಾರಿ ಅಥವಾ ಸಚಿವರು ಅಥವಾ ಯಾವುದೇ ಪಕ್ಷದ ರಾಜಕೀಯ ಕಾರ್ಯಕರ್ತರು ಸೇರಿದಂತೆ ಯಾವುದೇ ವಾಹನಗಳೊಂದಿಗೆ ಪ್ರವೇಶಿಸುವಂತಿಲ್ಲ. ವಾಹನಗಳನ್ನು ಭದ್ರತಾ ಹೊರ ವಲಯದಲ್ಲಿಯೇ ನಿಲುಗಡೆ ಮಾಡಿ ಕಾಲ್ನಡಿಗೆಯ ಮೂಲಕ ಮತ ಎಣಿಕೆ ಕೇಂದ್ರವನ್ನು ಪ್ರವೇಶಿಸಬೇಕು. ಮಾಧ್ಯಮ ಪ್ರತಿನಿಧಿಗಳಿಗೆ ಚುನಾವಣಾ ಆಯೋಗದಿಂದ ನೀಡಿರುವ ಅಧಿಕೃತ ಗುರುತಿನ ಚೀಟಿಗಳನ್ನು ಪ್ರದರ್ಶಿಸಿ / ಹಾಜರುಪಡಿಸಿದ ಬಳಿಕವೇ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶಿಸಲು ಅನುಮತಿ ಇರುತ್ತದೆ ಎಂದು ಹೇಳಿದರು.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಕರುನಾಡ ಕುರುಕ್ಷೇತ್ರ

  ಪ್ರಮುಖ ನಗರಗಳು