• A
  • A
  • A
ಪತ್ನಿಯನ್ನು ಹೆರಿಗೆಗೆ ನಗುತ್ತಲೇ ಕಳುಹಿಸಿದ್ದ ಗಂಡ... ಮಗು ಹೆತ್ತು ಮನೆಗೆ ಬಂದವಳಿಗೆ ಶಾಕ್‌!

ಕೊಪ್ಪಳ: ತನ್ನ ಪತ್ನಿಯನ್ನು ಹೆರಿಗೆಗೆಂದು ಕಳುಹಿಸಿದ ಪತಿರಾಯ ಇದ್ದಕ್ಕಿದ್ದಂತೆ ಕಾಣೆಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.


ಪ್ರಕರಣ ವಿವರ


ತಾಲೂಕಿನ ಹಾಲವರ್ತಿ ಗ್ರಾಮದ ಸಂತೋಷ್ ರಡ್ಡೇರ್ ನಾಪತ್ತೆಯಾದ ವ್ಯಕ್ತಿ. ಈತ ಕಳೆದ 8 ತಿಂಗಳಿನಿಂದ ನಾಪತ್ತೆಯಾಗಿದ್ದು, ಇಲ್ಲಿಯವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಈಗಾಗಲೇ ಮಡದಿಗೆ ಹೆರಿಗೆಯಾಗಿ ಮಗುವಿನೊಂದಿಗೆ ಗಂಡನ ಮನೆಗೆ ಬಂದಿದ್ದಾಳೆ. ಆ ಮಹಿಳೆ ಮಗುವಿನೊಂದಿಗೆ ಕುಟುಂಬವನ್ನು ಕರೆದುಕೊಂಡು ಗಂಡನಿಗಾಗಿ ಹುಡುಕಾಡುತ್ತಿದ್ದಾಳೆ. ಕಾರಣವಿಲ್ಲದೆ ವ್ಯಕ್ತಿ ನಾಪತ್ತೆಯಾಗಿರುವುದರಿಂದ ಆತನ ಕುಟುಂಬ ಕಂಗಾಲಾಗಿದೆ. ಪತಿಯನ್ನು ಹುಡುಕಿಕೊಡಿ ಎಂದು ಸಂತೋಷನ ಪತ್ನಿ ಮೇಘನಾ ಹಾಗೂ ಆಕೆಯ ಕುಟುಂಬಸ್ಥರು ಪೊಲೀಸ್ ಠಾಣೆ ಸೇರಿದಂತೆ ನಾನಾಕಡೆ ಅಲೆದಾಡುತ್ತಿದ್ದಾರೆ.



ಎರಡು ವರ್ಷಗಳ ಹಿಂದೆ ಕೊಪ್ಪಳ ತಾಲೂಕಿನ ಹಾಲವರ್ತಿ ಗ್ರಾಮದ ಸಂತೋಷ್ ರಡ್ಡೇರ್ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಬೈಲಹುದ್ದಿಗೇರಿ ಗ್ರಾಮದ ಮೇಘನಾಳನ್ನು ಮದುವೆಯಾಗಿದ್ದ. ಮೇಘನಾ ಗರ್ಭಿಣಿಯಾದ ಬಳಿಕ ಆಕೆಯನ್ನು ಹೆರಿಗೆಗಾಗಿ ಆಕೆಯ ತವರು ಮನೆ ಬೈಲಹುದ್ದಿಗೇರಿಗೆ ಖುಷಿಯಿಂದಲೇ ಕಳಿಸಿಕೊಟ್ಟಿದ್ದನಂತೆ. ಈಗಾಗಲೇ ಮೇಘನಾಗೆ ಹೆರಿಗೆಯಾಗಿ ಮುದ್ದಾದ ಮಗು ಜನಿಸಿದೆ. ಆದ್ರೆ ಅಂದು ತನ್ನ ಹೆಂಡತಿ ಮೇಘನಾಳನ್ನು ತವರು ಮನೆಗೆ ಕಳಿಸಿದ ಬಳಿಕ ಸಂತೋಷ ನಾಪತ್ತೆಯಾಗಿದ್ದಾನೆ. ಒಂಭತ್ತು ತಿಂಗಳಾದರೂ ಸಂತೋಷನ ಸುಳಿವು ಇನ್ನೂ ಸಿಕ್ಕಿಲ್ಲ. ಇದರಿಂದಾಗಿ ಸಂತೋಷನ ಪತ್ನಿ ಮೇಘನಾ ಸೇರಿದಂತೆ ಆಕೆಯ ಕುಟುಂಬದವರು ಹುಡುಕಾಟ ನಡೆಸಿದ್ದಾರೆ. ಆದರೂ ಆತನ ಸುಳಿವು ಸಿಕ್ಕಿಲ್ಲ. ಹೀಗಾಗಿ ಸಂತೋಷನ ಕುಟುಂಬಸ್ಥರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.

ಸಂತೋಷ್‌ ಹಾಲವರ್ತಿ ಗ್ರಾಮದಲ್ಲಿ ಪಾನ್‌ಶಾಪ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ. ಮನೆಯಲ್ಲಾಗಲಿ ಅಥವಾ ಹೆಂಡತಿಯೊಡನೆಯಾಗಲಿ ಯಾರೊಂದಿಗೂ ಜಗಳ ಮಾಡಿಕೊಂಡಿಲ್ಲ. ಆದರೆ, ಹೆಂಡತಿಯನ್ನು ತವರು ಮನೆಗೆ ಕಳಿಸಿದ ಮೇಲೆ ಎಲ್ಲಿಗೆ ಹೋದನೋ ಗೊತ್ತಿಲ್ಲ. ಈವರೆಗೂ ನನಗೂ ಒಂದೇ ಒಂದು ಫೋನ್ ಕರೆಯನ್ನೂ ಮಾಡಿಲ್ಲ ಎಂದು ಸಂತೋಷನ ತಾಯಿ ಕಣ್ಣೀರಿಡುತ್ತಿದ್ದಾರೆ. ಮಗನಿಗಾಗಿ ಎಲ್ಲ ಕಡೆಯೂ ಹುಡುಕಾಟ ನಡೆಸಿದ್ದೇವೆ. ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ದೂರನ್ನು ಸಹ ನೀಡಿದ್ದೇವೆ. ಆದರೂ ನನ್ನ ಮಗ ಇನ್ನೂ ಪತ್ತೆಯಾಗಿಲ್ಲ. ಹೆಂಡತಿ, ಮಗುವಿನ ಮುಖವನ್ನಾದರೂ ನೋಡಿ ಎಲ್ಲಿದ್ದರೂ ಮಗ ಸಂತೋಷ ಮನೆಗೆ ಬರಬೇಕು ಎಂದು ಅಳಲು ತೋಡಿಕೊಳ್ಳುತ್ತಾಳೆ ಸಂತೋಷನ ತಾಯಿ ಈರಮ್ಮ.

ಮಗ ಕಾಣೆಯಾಗಿರುವ ಕುರಿತಂತೆ ಈರಮ್ಮ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇಂದಲ್ಲ ನಾಳೆ ಸಂತೋಷ ಬಂದೇ ಬರುತ್ತಾನೆ ಎಂದು ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ, ಆತನ ಹುಡುಕಾಟವನ್ನು ಮುಂದುವರೆಸಿದ್ದಾರೆ.



CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಕರುನಾಡ ಕುರುಕ್ಷೇತ್ರ

  ಪ್ರಮುಖ ನಗರಗಳು